ಕನ್ನಡ ರಂಗಭೂಮಿ



ಕನ್ನಡ ರಂಗಭೂಮಿ ಬೆಳವಣಿಗೆಯಲ್ಲಿ ಕೆಳ-ತಳ ವರ್ಗದ ಕಲಾವಿದೆಯರ ಪಾಲ್ಗೊಳ್ಳುವಿಕೆ:
ಕನ್ನಡ ರಂಗಭೂಮಿಯ ಉಗಮದ ಕುರಿತು ಸ್ಪಷ್ಟತೆಯಿಲ್ಲದಿದ್ದರೂ, ಅತ್ಯಂತ ಪ್ರಾಚೀನವಾದದ್ದು ಎಂಬುದರಲ್ಲಿ ಸಂದೇಹವಿಲ್ಲ. ನಮಗೆ ದೊರೆತಿರುವ ಕನ್ನಡ ನಾಟಕಗಳಲ್ಲಿ 17ನೇ ಶತಮಾನದಲ್ಲಿ ರಚನೆಯಾದ ಚಿಕ್ಕದೇವರಾಜನ ಅಸ್ಥಾನದಲ್ಲಿದ್ದ ಸಿಂಗರಾರ್ಯನ ‘ಮಿತ್ರವಿಂದಾ ಗೋವಿಂದ’ ನಾಟಕ ಕೃತಿ ಪ್ರಾಚೀನವಾಗಿದೆ. ಇದು ಶ್ರೀಹರ್ಷನ ರತ್ನಾವಳೀ ನಾಟಕದ ಕನ್ನಡ ರೂಪವಾಗಿದೆ. ಇದಕ್ಕಿಂತ ಪ್ರಾಚೀನವಾದ ನಾಟಕ ದೊರೆತಿಲ್ಲವಾದರೂ ಪ್ರಾಚೀನ ಕನ್ನಡ ಸಾಹಿತ್ಯದ ಶಾಸನಗಳಲ್ಲಿ ನಾಟಕದ ಪ್ರಸ್ತಾಪವಾಗಿದೆ.
ಆಧುನಿಕ ಕನ್ನಡ ರಂಗಭೂಮಿಯನ್ನು ನಾವು ಸುಮಾರು ಎರಡು ಶತಮಾನಗಳಿಂದ ಈಚೆಗೆ ಕಾಣಬಹುದಾಗಿದೆ. ಈ ಕನ್ನಡ ರಂಗಭೂಮಿಯಲ್ಲಿ ಕಲಾವಿದೆಯರ ಪಾಲ್ಗೊಳ್ಳುವಿಕೆಯು ಆರಂಭಿಕ ದಿನಗಳಲ್ಲಿ ಇರಲಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಸುಮಾರು 150 ವರ್ಷಗಳಿಂದ ಈಚೆಗೆ ವೃತ್ತಿ ನಾಟಕ ಕಂಪನಿಗಳು ಪ್ರಾರಂಭವಾದವು, ಅವುಗಳಲ್ಲಿ ಮೊದಲಿಗೆ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ಇದಾದ ಎರಡು ದಶಕಗಳ ನಂತರ ಮಹಿಳಾ ಕಲಾವಿದೆರನ್ನು ಕೋಣ್ಣೂರು ನಾಟಕ ಕಂಪನಿಯ ಶಿವಮೂರ್ತಿ ಸ್ವಾಮಿಗಳು 1901ರಲ್ಲಿ ಗುಳೇಗುಡ್ಡದ ‘ಯಲ್ಲೂ ಬಾಯಿ’ ಎಂಬುವರನ್ನು ಪರಿಚಯಿಸಿದರು. ಇವರೇ ವೃತ್ತಿ ರಂಗಭೂಮಿಯ ಮೊದಲ ನಟಿ ಎನ್ನುತ್ತಾರೆ.
ಕನ್ನಡ ರಂಗಭೂಮಿಗೆ ಕೆಳ-ತಳ ವರ್ಗದ ಕಲಾವಿದೆಯರು ಪಾಲ್ಗೊಳ್ಳುವಿಕೆ ಆರಂಭವಾದದ್ದು, ಸ್ವಾತಂತ್ರ್ಯದ ನಂತರದ ಸಂದರ್ಭದಲ್ಲಿ ಎಂದು ಹೇಳಬಹುದು. 1970ರ ನಂತರದ ಕಾಲಘಟ್ಟದಲ್ಲಿ ಕೆಳ-ತಳ ವರ್ಗದ ಮಹಿಳೆಯರು ದಲಿತ-ಬಂಡಾಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಮಹಿಳೆಯರು ಕನ್ನಡ ರಂಗಭೂಮಿಗೆ ಅನಿವಾರ್ಯವಾಗಿ ಬಂದರು. ಆ ಸಂದರ್ಭದಲ್ಲಿ ಅನೇಕ ಹೋರಾಟಗಳು ಮಹಿಳೆ ಕುರಿತು ನಡೆಯುತ್ತಿದ್ದವು. ಆದ ಕಾರಣ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹೋರಾಟದ ಗೀತೆಗಳು, ಬೀದಿ ನಾಟಕಗಳನ್ನು ಮಾಡುತ್ತಿದ್ದರು. ಇದರಲ್ಲಿ ತೊಡಗಿಸಿಕೊಂಡ ಮಹಿಳಾ ಕಲಾವಿದೆಯರು ಕನ್ನಡ ರಂಗಭೂಮಿಗೆ ಪ್ರವೇಶಿಕೆ ಪಡೆದರು.
ಕನ್ನಡ ರಂಗಭೂಮಿ ಕೆಳ-ತಳ ವರ್ಗದ ಕಲಾವಿದೆಯರ ಪಾಲ್ಗೊಳ್ಳುವಿಕೆಯಿಂದ ಜನಪರ ಹಾಗೂ ಜೀವಪರವಾಯಿತು. ಈ ವರ್ಗದ ಕಲಾವಿದೆಯರು ವಂಶಪರಂಪರೆಯಾಗಿ ಕಲಾ ಪೋಷಕರಾಗಿದ್ದವರು. ಉದಾಹರಣೆಗೆ ತಳವರ್ಗದ ದೇವದಾಸಿಯರು ನೃತ್ಯ ಪ್ರಾವೀಣ್ಯತೆಯನ್ನು ಪಡೆದಿದ್ದರು. ಅನೇಕ ಬುಡುಕಟ್ಟು ಹಾಗೂ ಅಲೆಮಾರಿ ಸಮುದಾಯದವರು ಹಾಡುಗಾರರಾಗಿದ್ದರು. ಕೆಳ ವರ್ಗದ ಕಲಾವಿದೆಯರು ಪುರುಷ ಪಾತ್ರಗಳನ್ನು ಸಹ ಮಾಡುತ್ತಿದ್ದರು.
 ಇಂದು ಕೆಳ-ತಳವರ್ಗದ ಕಲಾವಿದೆಯರು ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮೇಲ್ವರ್ಗದ ಕಲಾವಿದೆಯರ ಶೋಷಣೆ ಹಾಗೂ ಸೌಂದರ್ಯದ ವಿಷಯದಲ್ಲಿ ಕೀಳಾಗಿ ನೋಡುವುದನ್ನು ಸಹ ಕಾಣಬಹುದು. ಈ ಕಲಾವಿದೆಯರಿಗೆ ಪುರುಷ ಕಲಾವಿದರ ವಕ್ರ ದೃಷ್ಠಿಯು ಬಿದ್ದಿದೆ ಎಂದರೆ ತಪ್ಪಾಗಲಾರದು. ಆದರೆ ಕೆಳವರ್ಗದ ಕಲಾವಿದೆಯರು ಆರ್ಥಿಕ ಕಾರಣಕ್ಕಾಗಿಯೇ ಇಂದು ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ.
ಕನ್ನಡ ರಂಗಭೂಮಿಗೆ ತಳ-ಕೆಳ ವರ್ಗದ ಕಲಾವಿದೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಲು ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿ ಸ್ಥಾಪಿಸಿರುವ ರಂಗಾಯಣಗಳು ಹಾಗೂ ಇನ್ನಿತರ ಸಹಾಯಧನ ಕಾರ್ಯಕ್ರಮಗಳೇ ಕಾರಣ ಎನ್ನಬಹುದು. ಸರ್ಕಾರದ ಸಂಸ್ಥೆಗಳಲ್ಲೆ ಅನೇಕ ಸರ್ಕಾರೇತರ ಸಂಸ್ಥೆಗಳು ಕೆಳ ವರ್ಗದ ಕಲಾವಿದೆಯರ ಪಾಲ್ಗೊಳ್ಳಲು ಅವಕಾಶ ಒದಗಿಸಿವೆ. ಅವುಗಳೆಂದರೆ ಕೋಲಾರದ ಆದಿಮ ಸಾಂಸ್ಕøತಿಕ ಕೇಂದ್ರ, ಶಿವಮೊಗ್ಗದ ಹೆಗ್ಗೋಡುವಿನ ನೀನಾಸಂ, ಬೆಂಗಳೂರಿನ ರಂಗಶಂಕರ, ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ, ಮೈಸೂರಿನ ನಟನಾ ಮುಂತಾದವು.
ಕರ್ನಾಟಕದಲ್ಲಿನ ಮೈಸೂರು, ಧಾರವಾಡ, ಕಲ್ಬುರ್ಗಿ ಹಾಗೂ ಶಿವಮೊಗ್ಗದಲ್ಲಿನ ರಂಗಾಯಣಗಳು ವಿವಿಧ ಕೋರ್ಸ್‍ಗಳನ್ನು ಆರಂಭಿಸಿವೆ. ಸಂಚಾರಿ ನಾಟಕ ತಂಡಗಳನ್ನು ರಚಿಸಿದ್ದು ಅವುಗಳಲ್ಲಿ ತಳವರ್ಗದ ಕಲಾವಿದೆಯರಿಗೆ ಅವಕಾಶಗಳನ್ನು ಒದಗಿಸುತ್ತಿದೆ. ಕಲಾವಿದೆಯರು ಪುರುಷ ಪಾತ್ರಗಳನ್ನು ಸಹ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ವಿಶೇಷ ಘಟಕ ಯೋಜನೆಯಡಿಯಲ್ಲಿ ಸಹಾಯಧನ ಒದಗಿಸಿ ಕಲಾವಿದೆಯರ ಭಾಗವಹಿಸುವಿಕೆ ಹೆಚ್ಚಾಗಿದೆ.
ಕನ್ನಡ ರಂಗಭೂಮಿಗೆ ದೂರದರ್ಶನ ಮಾಧ್ಯಮದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಹಾವಳಿಯಿಂದ ನಾಟಕಗಳಲ್ಲಿ ಅಭಿನಯಿಸುವ ಹಾಗೂ ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ಹೊಸ ಹೊಸ ಪ್ರಯೋಗಗಳನ್ನು ರಂಗಭೂಮಿ ತಂಡಗಳು ಮಾಡುತ್ತಿವೆ. ಉದಾಹರಣೆಗೆ ಕನ್ನಡ ಸಾಹಿತ್ಯದ ಅತ್ಯುತ್ತಮ ನಾಟಕ ಕೃತಿಗಳ ಅಭಿನಯ, ಕಾದಂಬರಿಗಳನ್ನು ನಾಟಕ ಪ್ರಕಾರಕ್ಕೆ ಹೊಗ್ಗಿಸುವುದು. ಹಾಗೇಯೇ ಆಧುನಿಕ ಸಂಗೀತ ಉಪಕರಣಗಳ ಬಳಕೆ ಹಾಗೂ ಆಧುನಿಕ ತಂತ್ರಜ್ಞಾನದ ಬೆಳಕಿನ ವಿನ್ಯಾಸದ ಉಪಕರಣಗಳನ್ನು ಬಳಸಿ ಆಧುನಿಕ ರಂಗನ್ನು ಕನ್ನಡ ರಂಗಭೂಮಿಗೆ ತರಲಾಗಿದೆ. ಸುಂದರ ನಟಿಯರನ್ನು ಕರೆ ತಂದು ನಾಟಕಗಳಲ್ಲಿ ಅಭಿನಯಿಸುವಂತೆ ಮಾಡುತ್ತಿರುವುದು ಹೊಸ ಆಕರ್ಷಣೆಯನ್ನು ನಾಟಕದ ಪ್ರೇಕ್ಷಕರಲ್ಲಿ ಉಂಟು ಮಾಡುತ್ತಿದೆ.
ಕನ್ನಡ ರಂಗಭೂಮಿಯಲ್ಲಿ ಕೆಳ ವರ್ಗದ ಕಲಾವಿದೆಯರಿಗೆ ವೃತ್ತಿ ನಾಟಕ ತಂಡಗಳಲ್ಲಿ ಅವಕಾಶ ಇರಲಿಲ್ಲ, ಇದಕ್ಕೆ ಹವ್ಯಾಸಿ ನಾಟಕ ತಂಡಗಳು ಅವಕಾಶ ಒದಗಿಸಿದವು. ಮೊದಲು ಸ್ರ್ತೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದರು. ಆದರೆ ಪುರುಷರ ಅಭಿನಯ ಸ್ತ್ರೀಯರ ನಯ, ನಾಜೂಕಿನ ಹಾವ ಭಾವಗಳ ಸಹಜತೆ ಇರಲಿಲ್ಲ. ಆದ್ದರಿಂದ ಸ್ತ್ರೀಯರೇ ನಾಟಕಗಳಲ್ಲಿ ಅಭಿನಯಿಸಲು ನಾಟಕ ತಂಡಗಳು ಪ್ರಯೋಗಿಸಿ ಯಶ ಕಂಡರು. ಸ್ತ್ರೀಯರ ಪಾಲ್ಗೊಳ್ಳುವಿಕೆ ರಂಗಭೂಮಿಗೆ ಆದ ನಂತರ ಹೊಸ ತಿರುವು ಹಾಗೂ ಆಕರ್ಷಣೆ ಪಡೆದುಕೊಂಡಿತು. 1898ರಲ್ಲಿ ಪಾಪಸಾನಿ ಎಂಬಾಕೆ ಮೊದಲ ‘ಸ್ತ್ರೀ ನಾಟಕ ಮಂಡಳಿ’ಯನ್ನು ಸ್ಥಾಪಿಸಿದರು. 1908ರಲ್ಲಿ ಲಕ್ಷ್ಮೇಶ್ವರದ ಬಚ್ಚಸಾನಿ ಸ್ಥಾಪಿಸಿದ ಮಹಿಳಾ ನಾಟಕ ಮಂಡಳಿ ಪುರುಷ ಪಾತ್ರಗಳನ್ನು ಮಹಿಳೆಯರೇ ಅಭಿನಯಿಸುತ್ತಿದ್ದರು.
 ಕನ್ನಡ ರಂಗಭೂಮಿಗೆ ಮಹಿಳೆ ಪಾದಾರ್ಪಣೆ ಮಾಡಿದ ನಂತರ ಅದು ಶ್ರೀಮಂತ ಹಾಗೂ ಸುಂದರವಾಯಿತು. ಮಹಿಳೆ ರಂಗಭೂಮಿಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ಸಂಘಟಕಿಯಾಗಿ ನೇಪಥ್ಯದಲ್ಲೂ ಕೆಲಸ ಮಾಡಿದ್ದು ಶ್ಲಾಘನೀಯ. ಜಾನಪದ ರಂಗಭೂಮಿ, ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯಲ್ಲಿ ಪುರುಷರು ನಿರ್ವಹಿಸುತ್ತಿದ್ದ ಸ್ತ್ರೀ ಪಾತ್ರಗಳನ್ನು ಕೆಳ ವರ್ಗದ ಕಲಾವಿದೆಯರು ನಿರ್ವಹಿಸಿದರು. ಇದರಿಂದ ಕನ್ನಡ ರಂಗಭೂಮಿ ಬೆಳವಣಿಗೆಗೆ ಸಹಕಾರಿಯಾಯಿತು.
ರಂಗಭೂಮಿಯಲ್ಲಿ ತಳ ವರ್ಗದ ಮಹಿಳೆ ಪುರುಷನಿಗೆ ಸರಿಸಾಟಿಯಾಗಿ ತೊಡಗಿಕೊಂಡಿದ್ದಾಳೆ. ಅನೇಕ ನಟಿಯರು, ನಿರ್ದೇಶಕಿಯರು ರಂಗ ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದಾರೆ.
 ಈ ಹಿಂದೆ ಸಂಘ ಸಂಸ್ಥೆಗಳು, ಹವ್ಯಾಸಿ ರಂಗ ತಂಡಗಳ ನಾಟಕಗಳಲ್ಲಿ ಪಾತ್ರನಿರ್ವಹಿಸುವ ಎದುರಾಗುವ ಹಲವು ತೊಡಕುಗಳಲ್ಲಿ ಸ್ತ್ರೀ ಪಾತ್ರವೂ ಒಂದಾಗಿತ್ತು. ಆಗೆಲ್ಲ ಪುರುಷರೇ ಸ್ತ್ರೀ ಪಾತ್ರ ಧರಿಸಬೇಕಾಗುತ್ತಿತ್ತು. ಈಗಲೂ ಯಕ್ಷಗಾನ ಮತ್ತು ಕೆಲವು ಪೌರಾಣಿಕ ನಾಟಕಗಳಲ್ಲಿ ಪುರುಷರೇ ನಿರ್ವಹಿಸುತ್ತಿದ್ದಾರೆ. ಕೆಲವು ನಾಟಕಕಾರರು ಮಹಿಳೆಯರ ಪಾತ್ರವಿಲ್ಲದ ನಾಟಕಗಳನ್ನು ಬರೆದಿದ್ದಾರೆ.
ಕನ್ನಡ ರಂಗಭೂಮಿ ಬೆಳವಣಿಗೆಗೆ ಜನಪದ ರಂಗಭೂಮಿಯ ಕಲಾವಿದೆಯರ ಪಾತ್ರ ಸಹ ದೊಡ್ಡದು. ಜನಪದ ರಂಗಭೂಮಿಯಲ್ಲಿ ತೊಡಗಿಸಿಕೊಂಡವರಲ್ಲಿ ತಳ ವರ್ಗದ ಮಹಿಳೆಯರೇ ಹೆಚ್ಚು, ಕಾರಣ ಕಲೆ ಎಂಬುದು ವಂಶ ಪರಂಪರೆಯಿಂದ ಬಂದಿದ್ದರಿಂದ ರಂಗಭೂಮಿಯಲ್ಲಿ ತೊಡಗಲು ಅವರಿಗೆ ಸಹಕಾರಿಯಾಯಿತು. ನಾಟಕ ಪ್ರದರ್ಶನಗಳಲ್ಲಿನ ಸಂಗೀತವನ್ನು ಮಹಿಳೆಯರೇ ನೀಡುತ್ತಿದ್ದರು, ಅದರ ಜೊತೆಗೆ ಪ್ರಸಾಧನ, ವಸ್ತ್ರ ವಿನ್ಯಾಸ ಕಾರ್ಯವನ್ನು ಮಹಿಳೆಯರು ಮಾಡುತ್ತಿದ್ದರು. ಜನಪದ ರಂಗಭೂಮಿಯಿಂದ ವನಜಮ್ಮ, ಸುಶೀಲಮ್ಮ, ಮಂಜುಳ ಮುಂತಾದವರು ರಂಗಪ್ರವೇಶ ಮಾಡಿದರು.
 ತಳ ವರ್ಗದ ಅಲೆಮಾರಿ ಮತ್ತು ಬುಡುಕಟ್ಟು ಸಮುದಾಯದ ಪುರುಷರಷ್ಟೇ ಅಲ್ಲದೇ ಹಲವಾರು ಮಹಿಳಾ ಕಲಾವಿದರು ಕನ್ನಡ ರಂಗಭೂಮಿಯ ನಾಟಕಗಳಲ್ಲಿ ಪ್ರವೇಶ ಪಡೆದು ಹೊಸ ರೀತಿಯ ರಂಗಭೂಮಿಯ ಬೆಳವಣಿಗೆಗೆ ಕಾರಣರಾದರು. ಉದಾಹರಣೆಗೆ ಸಿದ್ಧಿಗಳು, ಸೋಲಿಗರು, ಕಾಡು ಕುರುಬರು ಮತ್ತು ಜೇನು ಕುರುಬರು ಕನ್ನಡ ರಂಗಭೂಮಿಯನ್ನು ಪ್ರವೇಶಿಸಿದರು.
ಸೋಲಿಗರು ಮತ್ತು ಸಿದ್ಧಿ ಸಮುದಾಯದ ಮಹಿಳಾ ಕಲಾವಿದೆಯರು ಹೆಚ್ಚು ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ.ಇದರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ. ಇವರ ವಿಶಿಷ್ಟ ಶೈಲಿಯ ಭಾವಾಭಿನಯ, ನೃತ್ಯ ಹಾಗೂ ಹಾಡುಗಾರಿಕೆ ಸಾಕಷ್ಟು ಜನರನ್ನು ರಂಗಭೂಮಿಯ ಕಡೆಗೆ ಸೆಳೆಯಲು ಸಹಕಾರಿಯಾಗಿದೆ.
ಕನ್ನಡ ರಂಗಭೂಮಿಯಲ್ಲಿ ಕೆಳವರ್ಗದ ಕಲಾವಿದರು 30 ದಶಕಗಳಿಂದ ಏರಿಕೆಯಾಗಿರುವುದನ್ನು ಕಾಣಬಹುದು. ಕಾಲೇಜು ಹಂತದಲ್ಲಿ ರಂಗ ಶಿಕ್ಷಣದ ಕೋರ್ಸ್‍ಗಳನ್ನು ಪ್ರಾರಂಭಿಸಿದ್ದರಿಂದ ಹಾಗೂ ರಾಷ್ಟ್ರೀಯ ನಾಟಕ ಶಾಲೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಕನ್ನಡ ರಂಗಭೂಮಿಗೆ ಕೆಳ ವರ್ಗದ ಮಹಿಳೆಯರು ಬರಲು ಕಾರಣವಾಗಿದೆ.
ಕನ್ನಡ ರಂಗಭೂಮಿಗೆ ಸರ್ಕಾರಿ ರಂಗ ಶಿಕ್ಷಣ ಸಂಸ್ಥೆಗಳಲ್ಲದೆ ಖಾಸಗಿ ರಂಗ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ. ಶಿವಮೊಗ್ಗ ಜಿಲ್ಲೆಯ ಹೆಗ್ಗೋಡುವಿನಲ್ಲಿರುವ ನೀನಾಸಂ ರಂಗಶಿಕ್ಷಣ ಸಂಸ್ಥೆಯು ಹಲವಾರು ವರ್ಷಗಳಿಂದ ಸಾವಿರಾರು ರಂಗ ಶಿಕ್ಷಣಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬರುತ್ತಿದೆ. ಇಲ್ಲಿ ಹಲವಾರು ತಳ ವರ್ಗದ ಮಹಿಳೆಯರು ಕಲಾವಿದೆಯರಾಗಿ ಬಂದಿದ್ದಾರೆ. ಇಲ್ಲಿ ಅಭಿನಯ, ನೃತ್ಯ, ಸಂಗೀತ, ಹಾಡುಗಾರಿಕೆ ಹಾಗೂ ನಿರ್ದೇಶನವನ್ನು ಕಲಿಸಿಕೊಡುತ್ತಿದೆ. ಅದೇ ರೀತಿ ಚಿತ್ರದುರ್ಗದ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘವು ಶಿವಸಂಸ್ಕøತಿಗೆ ಸಂಬಂಧಿಸಿದ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಇಲ್ಲಿಯೂ ತಳ ವರ್ಗದ ಕಲಾವಿದೆಯರು ಕನ್ನಡ ರಂಗಭೂಮಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಹಾಗೂ ಪಾಲ್ಗೊಳ್ಳುತ್ತಿದ್ದಾರೆ.
ಇವೆರಡಕ್ಕಿಂತ ಭಿನ್ನವಾಗಿ ಕೋಲಾರದ ಆದಿಮ ಸಾಂಸ್ಕøತಿಕ ಕೇಂದ್ರವು ಸುಮಾರು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರವು ರಂಗ ಶಿಕ್ಷಣಕ್ಕೆ ಗ್ರೀಕ್ ಮಾದರಿಯ ಬಯಲು ರಂಗ ಮಂದಿರ ಹೊಂದಿದೆ. ಕೆಳ-ತಳ ವರ್ಗದವರಿಗಾಗಿಯೇ ಆರಂಭವಾದ ಸಂಸ್ಥೆಯೇ, ಆದಿಮ ಸಾಂಸ್ಕøತಿಕ ಕೇಂದ್ರ. ಇದರ ರುವಾರಿ ಕೋಟಿಗಾನಹಳ್ಳಿ ರಾಮಯ್ಯನವರು. ಇವರ ಕಾಳಜಿಯ ಕೂಸಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಕೆಳ ವರ್ಗದ ಕಲಾವಿದ ಕಲಾವಿದೆಯರೇ ಅಭಿನಯಿಸಿದ ‘ಏಕಲವ್ಯ’ ನಾಟಕ ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿದೆ. ನಾಯಿತಿಪ್ಪ, ಒಗಟಿನ ರಾಣಿ, ಕಾಗೆ ಕಣ್ಣು ಇರುವೆ ಬಾಲ, ಯಾರು ದೊಡ್ಡವರು ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಅರುಣ, ಅಂಜಲಿ, ಉಮಾ ಇಂದು ಕನ್ನಡ ರಂಗಭೂಮಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಕನ್ನಡ ರಂಗಭೂಮಿಯು ಇಲ್ಲಿವರೆಗೆ ಪಯಣ ಸಾಗುವುದಕ್ಕೆ ತಳ ವರ್ಗದ ಕಲಾವಿದೆಯರ ನಾಟಕ ಅಭಿನಯ, ಹಾಡುಗಾರಿಕೆ, ನೃತ್ಯ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ. ಹಾಗೇಯೇ ರಂಗ ಸಜ್ಜಿಕೆ ನಿರ್ಮಾಣ, ಪ್ರಸಾಧನ, ವಸ್ತ್ರ ವಿನ್ಯಾಸವನ್ನು ಮಾಡುವುದರಲ್ಲಿ ತಮ್ಮ ನಿಪುಣತೆಯನ್ನು ತೋರಿಸಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ನಾಟಕಗಳಲ್ಲಿ ಜೀವಪರ ಹಾಗೂ ಜನಪರವಾಗಿ ಜನ ಮಾನಸವನ್ನು ತಲುಪಲು ತಳ ವರ್ಗದ ಕಲಾವಿದರ ವಾಸ್ತವ ಹಾಗೂ ನೈಜ ಅಭಿನಯವೇ ಕಾರಣವಾಗಿದೆ. ದೇವನೂರು ಮಹಾದೇವರವರು ರಚಿಸಿರುವ ‘ಒಡಲಾಳ’ ನಾಟಕದ ಸಾಕವ್ವನ ಪಾತ್ರ ನೈಜವಾಗಿ ಮೂಡಲು ತಳ ಸಮುದಾಯದಿಂದ ಬಂದ ಕಲಾವಿದೆಯರಿಂದಲೇ ಸಾಧ್ಯ. ತಳ ವರ್ಗದ ಕಲಾವಿದೆಯರು ಅಭಿನಯಿಸಲು ಹಲವಾರು ಅವಕಾಶಗಳನ್ನು ಮೇಲ್ವರ್ಗದ ಕಲಾವಿದೆಯರು ಆಕ್ರಮಿಸುತ್ತಿದರು. ಈಗ ಒಂದಿಷ್ಟು ಅವಕಾಶಗಳು ಸರ್ಕಾರದ ರಂಗಾಯಣದಂತಹ ಸಂಸ್ಥೆಗಳು ಒದಗಿಸುತ್ತಿವೆ.
ಕನ್ನಡ ರಂಗಭೂಮಿಯಲ್ಲಿ ತಳ-ಕೆಳ ವರ್ಗದ ಕಲಾವಿದೆಯರಿಗೆ ಅವಕಾಶಗಳಷ್ಟು ಸಿಕ್ಕಷ್ಟೇ ವೇಗವಾಗಿ ತಪ್ಪುತ್ತಿವೆ. ಅದಕ್ಕೆ ಮೇಲ್ವರ್ಗದ ಕಲಾವಿದೆಯರು ಕಾರಣರಾದರೇ, ಮತ್ತೊಂದು ರಂಗಭೂಮಿ ಚಟುವಟಿಕೆಗಳು ಬೆಂಗಳೂರು, ಮೈಸೂರು ಹಾಗೂ ದಾರವಾಡ ನಗರಗಳಿಗೆ ಸೀಮಿತವಾಗಿರುವುದರಿಂದ ರಾಜ್ಯದ ಇತರೆ ಭಾಗಗಳ ಕಲಾವಿದೆಯರಿಗೆ ವಸತಿ, ಊಟ ಹಾಗೂ ಆರ್ಥಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ಅನೇಕ ಸಮಸ್ಯೆ-ತೊಡಗುಗಳನ್ನು ಹೊತ್ತುಕೊಂಡೆ ಯಶಸ್ಸು ಸಾಧಿಸುವುದು ಅನಿವಾರ್ಯವಾಗಿದೆ. ಗ್ರಾಮೀಣ ಭಾಗದಿಂದ ಬಹುತೇಕ ಕಲಾವಿದೆಯರಿಗೆ ಮುಖ್ಯವಾಗಿ ಕಾಡುವ ಸಮಸ್ಯೆ ಎಂದರೆ ವಸತಿ ಸಮಸ್ಯೆಯಾಗಿದೆ. ಇವರ ಜೊತೆಗೆ ನಗರ ಪ್ರದೇಶಗಳ ಕಲಾವಿದರು ಬೆರೆಯುವುದು ಸಹ ಒಂದು ಕಗ್ಗಂಟಾಗಿದೆ.
ನಾಟಕ ಎಂದರೆ ಅದೊಂದು ರಂಗ, ನಟ-ನಟಿಯರು ಅದಕ್ಕೆ ಜೀವ ತುಂಬುತ್ತಾರೆ. ತಂತ್ರಜ್ಞರು ಅದಕ್ಕೆ ಮೆರಗನ್ನು ತಮ್ಮ ಬೆಳಕಿನ ವಿನ್ಯಾಸದಿಂದ ನೀಡುತ್ತಾರೆ. ಈ ರಂಗದ ಮೇಲೆ ಮುಕ್ತ ಮಾತುಕತೆ ಅವಶ್ಯಕ. ಗಂಡು-ಹೆಣ್ಣು, ಮೇಲು-ಕೀಳು, ಕಪ್ಪು-ಬಿಳುಪು ಎಂಬ ಭಿನ್ನತೆಗಳನ್ನು ಬಿಟ್ಟು ನಟ-ನಟಿಯರು ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಕನ್ನಡ ರಂಗಭೂಮಿ ಬೆಳವಣಿಗೆಯಾಗುತ್ತದೆ.
ಕನ್ನಡ ರಂಗಭೂಮಿ ಇಂದು ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಅದು ರಂಗ ಸಜ್ಜಿಕೆ ವಿನ್ಯಾಸದಲ್ಲಿ ಆಗಬಹುದು ಹಾಗೂ ನಟನೆಯಲ್ಲಿ ಆಗಬಹುದು. ಈ ಹಿಂದಿಗಿಂತಲೂ ವಿಭಿನ್ನವಾಗಿರುವುದನ್ನು ಕಾಣಬಹುದು.  
ಕನ್ನಡ ರಂಗಭೂಮಿಗೆ ಬರುವವರ ಸಂಖ್ಯೆ ಗಣನೀಯವಾಗಿ 2 ದಶಕಗಳಲ್ಲಿ ಹೆಚ್ಚಾಗಿದೆ. ಆದರೆ ಉಳಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಚಲನಚಿತ್ರ, ದೂರದರ್ಶನ ಮಾಧ್ಯಮ ಹಾಗೂ ಇನ್ನಿತರ ಕ್ಷೇತ್ರಗಳಿಗೆ ವಲಸೆ ಹೋಗುತ್ತಿದ್ದಾರೆ.
ನಾಟಕ ಅಭಿನಯಿಸಲು ತಯಾರಿ, ತಾಲೀಮು ಅಗತ್ಯ ಅದಕ್ಕೆ ಬರುವ ಕಲಾವಿದ-ಕಲಾವಿದೆಯರಿಗೆ ಸಾರಿಗೆ ಸಂಪರ್ಕದ ಕೊರತೆ ಹಿಂದೆಯಿತ್ತು. ಆದರೆ ಈಗ ಅದು ಬದಲಾಗಿದೆ. ತಾವು ತಾಲೀಮು ಹಾಗೂ ರಂಗ ತರಬೇತಿ ನಡೆಸುವ ಸ್ಥಳಗಳಲ್ಲಿಯೇ ವಸತಿ ಹಾಗೂ ಊಟದ ಸೌಲಭ್ಯವನ್ನು ನೀಡಲಾಗುತ್ತಿದೆ.
ಕನ್ನಡ ರಂಗಭೂಮಿಯಲ್ಲಿ ವೃತ್ತಿ ರಂಗಭೂಮಿಯಷ್ಟೇ ಸಮಾನವಾಗಿ ಹವ್ಯಾಸಿ ರಂಗಭೂಮಿಯು ಬೆಳೆಯುತ್ತಿದೆ. ಸಮುದಾಯ, ಕಾರ್ಮಿಕ ಸಂಘಟನೆ ನೌಕಕರು, ಸಾರಿಗೆ ಇಲಾಖೆಯ ನೌಕರರು, ಶಿಕ್ಷಣ ಕ್ಷೇತ್ರದ ತೊಡಗಿರುವವರು, ಬ್ಯಾಂಕ್ ಉದ್ಯೋಗಿಗಳು ಇನ್ನಿತರರು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಕಲೆಯ ಉಪಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹವ್ಯಾಸಿ ರಂಗಭೂಮಿಯ ಜೊತೆಗೆ ಸಂಚಾರಿ ನಾಟಕ ತಂಡಗಳು ರಚನೆಯಾಗಿ ರಾಜ್ಯದೆಲ್ಲೆಡೆ ಸುತ್ತಾಡಿ ನಾಟಕಗಳನ್ನು ಅಭಿನಯಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿನ ನಾಟಕೋತ್ಸವಗಳಲ್ಲಿ ಅಭಿನಯಿಸಿ ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಈ ಸಂಚಾರಿ ನಾಟಕಗಳಲ್ಲಿ ಅಭಿನಯಿಸುವ ಕಲಾವಿದೆಯರಲ್ಲಿ ಕೆಳ-ತಳ ವರ್ಗದವರೇ ಹೆಚ್ಚು.
ಕನ್ನಡ ರಂಗಭೂಮಿಯ ಆರಂಭದ ದಿನಗಳಲ್ಲಿ ಪೌರಾಣಿಕ ಹಾಗೂ ಧಾರ್ಮಿಕ ನಾಟಕಗಳೇ ಹೆಚ್ಚಾಗಿದ್ದವು. ಈಚೆಗೆ ಸಾಮಾಜಿಕ, ರಾಜಕೀಯ ವಿಡಂಬನೆಯ ನಾಟಕಗಳ ಸಂಖ್ಯೆ ಹೆಚ್ಚಾಗಿದೆ.
ಸಾಮಾಜಿಕ ನಾಟಕಗಳಲ್ಲಿ ಕೆಳವರ್ಗದ ಕಲಾವಿದೆಯರು ಅಭಿನಯಿಸುವುದರಿಂದ ಅವರ ಬದುಕಿನ ನೈಜ ಚಿತ್ರಣವನ್ನು ತಮ್ಮ ನಾಟಕಗಳ ಅಭಿನಯದ ಮೂಲಕ ಕಟ್ಟಿಕೊಡುತ್ತಿದ್ದಾರೆ. ಇದರಿಂದ ಪ್ರೇಕ್ಷಕರ ಭಾವೋದ್ವೇಗಕ್ಕೆ ಒಳಗಾಗಿ ಸಮ ಸಮಾಜದ ಕನಸನ್ನು ಕಾಣಲು ಸಹಕಾರಿಯಾಗಿದೆ. ನಾಟಕ ಜನರ ಜೀವನದ ಜೊತೆಗಿರಬೇಕು ಹಾಗೂ ವಾಸ್ತವ ನೆಲಗಟ್ಟಿನ ಜೊತೆಗಿರಬೇಕು. ಈ ತರದ ನಾಟಕಗಳು ಜನರನ್ನು ಸೆಳೆಯುತ್ತವೆ ಹಾಗೂ ಸಮಾಜದ ಅನ್ಯಾಯ, ಅಕ್ರಮ ಹಾಗೂ ಭ್ರಷ್ಟತೆಯ ಕಡಿವಾಣಕ್ಕೆ ಹತೋರೆಯುತ್ತದೆ.
ಕನ್ನಡ ರಂಗಭೂಮಿ ಬೆಳವಣಿಗೆಯು ಇಲ್ಲಿಯವರೆಗೆ ಯಶಸ್ವಿಯಾಗಿ ಮುನ್ನಡೆಯಲು ಕೆಳ-ತಳ ವರ್ಗದ ಕಲಾವಿದ-ಕಲಾವಿದೆಯರ ಪಾಲ್ಗೊಳುವಿಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ತಳ ಮಟ್ಟದ ಕಲಾವಿದೆಯರ ಕಷ್ಟಗಳನ್ನು, ತೊಡಕುಗಳನ್ನು ಅರಿಯಲು ಆಯಾ ನಾಟಕ ಸಂಸ್ಥೆಗಳು, ತಂಡಗಳು ಹಾಗೂ ಸರ್ಕಾರಿ ಇಲಾಖೆಗಳು ಕೆಲಸ ಮಾಡಬೇಕಾಗುತ್ತವೆ.
ಕೆಳ-ತಳ ವರ್ಗದ ಕಲಾವಿದೆಯರಲ್ಲಿ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕು. ನಾಟಕ ತಂಡಗಳಲ್ಲಿ ಪುರುಷ ಕಲಾವಿದರಿಂದ ಹಾಗೂ ಮೇಲ್ವರ್ಗದವರ ಕಲಾವಿದರಿಂದ ಆಗುವಂತಹ ಒಡಕುಗಳು-ತೊಡಕುಗಳನ್ನು ಕಡಿಮೆಗೊಳಿಸಬೇಕಾಗುತ್ತದೆ. ಇಲ್ಲವಾದರೆ ಕನ್ನಡ ರಂಗಭೂಮಿ ಚಟುವಟಿಕೆಯ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾವಿದೆಯರ ಸಂಖ್ಯೆ ಕಡಿಮೆಯಾಗುತ್ತದೆ. ಈಗ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಅನಿವಾರ್ಯವಾಗಿ ಹೊರಬರುತ್ತಾರೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಅಕಾಡೆಮಿಗಳು ಹಾಗೂ ಸಂಸ್ಥೆಗಳು ತನ್ನ ಕಾರ್ಯನಿರ್ವಹಿಸಬೇಕು.
ಕನ್ನಡ ರಂಗಭೂಮಿ ಬೆಳವಣಿಗೆಯಲ್ಲಿ ಪಾಲ್ಗೊಂಡಿರುವ ಕೆಳ-ತಳ ವರ್ಗದ ಕಲಾವಿದೆಯರಲ್ಲಿ ಗುರುತಿಸಲಾಗದ ಹಾಗೂ ಗೋಚರಿಸದ ಅನೇಕ ಸಮಸ್ಯೆಗಳಿವೆ ಅವುಗಳನ್ನು ತಿಳಿಯುವ ಕೆಲಸ ಆಗಬೇಕಾಗಿದೆ. ವಿವಿಧ ಸೌಲಭ್ಯಗಳನ್ನು ಹಾಗೂ ಅವಕಾಶಗಳನ್ನು ಒದಗಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇತರೆ ಕಲಾವಿದರ ಸಹಕಾರ ಹಾಗೂ ಸಹಬಾಳ್ವೆಯಿಂದ ಮಾತ್ರ ಕನ್ನಡ ರಂಗಭೂಮಿಯಲ್ಲಿ ತಳ ವರ್ಗದ ಮಹಿಳಾ ಕಲಾವಿದೆಯರ ಪಾಲ್ಗೊಂಡು ಕಲಾ ಅಭಿವ್ಯಕ್ತಿಯನ್ನು ಮೂಡಿಸಲು ಸಾಧ್ಯ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಯಲು ಸೀಮೆ