ಅರಿಯದ ಗಜಲ್‌ಗೊಂದು ಇಣುಕು ನೋಟ   

- ಮ.ನಾ.ಪ್ರವೀಣ (ಪ್ರವೀಣ.ಎನ್) ಕೋಲಾರ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್‌ ಗ್ರಾಮದ ಯುವ ಉತ್ಸಾಹಿ ಬರಹಗಾರ ಗೆಳೆಯ ʼಅಭಿಷೇಕ್‌ ಬಳೆ ಮಸರಕಲ್‌ʼ ರಚಿಸಿರುವ “ಗೋರಿ ಮೇಲಿನ ಹೂ” ಗಜಲ್‌ ಸಂಕಲನಕ್ಕೆ ೨೦೧೯ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್‌ ನೀಡಲಾಗುವ ʼಪಂಪಮ್ಮ ಶರಣೇಗೌಡ ವಿರುಪಾಪುರʼ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಸಂದರ್ಭದಲ್ಲಿ ಈ ಗಜಲ್‌ ಸಂಕಲನ ಕುರಿತು ಮಾತನಾಡುವುದು ಬಹಳ ಹೆಮ್ಮೆ ಎನಿಸಿ ಮಾತನಾಡುತ್ತಿದ್ದೇನೆ.

ʼಅಭಿಷೇಕ್‌ ಬಳೆʼ ಎಂಬ ಗಜಲ್‌ಕಾರ ತನ್ನ ಬರಹದ ಮೂಲಕ ಗೆಜ್ಜೆ ಕಟ್ಟಿ ಕುಣಿಯಲು ಶುರು ಮಾಡಿದ್ದಾನೆ. ಈ ಕುಣಿತಕ್ಕೆ ನನ್ನ ಸಹೃದಯವು ಮನಸ್ಸು ಏನು ಹೇಳದಿದ್ದರೆ ಉತ್ಪ್ರೇಕ್ಷೆ ಎನಿಸುತ್ತದೆ. ಅಭಿಷೇಕ್ ಬಳೆ ನನಗೆ ರಾಮನಗರದ ಸಮೀಪದಲ್ಲಿ ನಡೆದ ಕಾವ್ಯಕಮ್ಮಟದಲ್ಲಿ ಪರಿಚಯ. ಹೆಚ್ಚೇನು ಮಾತನಾಡದ ಮೌನಿಯಂತಿದ್ದ, ಆದರೆ ಅವನ ಒಂದೆರಡು ಮಾತುಗಳು ಕೇಳಿದೊಡನೆ ಬಹಳ ಪಕ್ವವಾದಂತೆ ತೋರಿತ್ತಿದ್ದ. ಆಗ ಅವನ ಕೆಲವು ಕವನ/ಗಜಲ್ಗಳ ಸಾಲುಗಳನ್ನು ನೋಡಿ ಕೇಳಿ ಖುಷಿಪಟ್ಟಿದೆ. ಇದಾದ ಕೆಲವು ದಿನಗಳ ನಂತರ ಅಭಿಯು ʼಗೋರಿ ಮೇಲಿನ ಹೂʼ ಗಜಲ್‌ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಕಳುಹಿಸಿಕೊಟ್ಟು ಪ್ರತಿಕ್ರಿಯಿಸಲು ಹೇಳಿದಾಗ  ʼಕನ್ನಡ ಸಾಹಿತ್ಯ ಪರಿಷತ್‌ʼನಿಂದ ದತ್ತಿ ಪ್ರಶಸ್ತಿ ಪುರಸ್ಕಾರ ದೊರೆತ ಈ ಸುಸಂದರ್ಭದಲ್ಲಿ ಈ ಕೃತಿಯ ಬಗ್ಗೆ ಕೆಲ ಮಾತುಗಳನ್ನು ಆಡಲು ಸೂಕ್ತವೆನಿಸಿ ಪ್ರತಿಕ್ರಿಯಿಸುತ್ತಿದ್ದೇನೆ.

ʼಗಜಲ್‌ʼ ಮೂಲತಃ ಅರಬ್ಬಿ ಶಬ್ಧ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್‌ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಉರ್ದು ಭಾಷೆಯಲ್ಲಿದ್ದ ಗಜಲನ್ನು ಕನ್ನಡಕ್ಕೆ ತಂದವರು ಶಾಂತರಸರು.

ಗಜಲ್‌ ಗೇಯತೆಯುಳ್ಳ ಕಾವ್ಯಪ್ರಕಾರ. ಗಜಲ್ ಒಂದು ಮಾಂತ್ರಿಕ ದ್ವಿಪದಿಯಲ್ಲಿರುವ ಕಾವ್ಯ ಪ್ರಕಾರ. ಪದಪುಂಜʼ/ಪ್ರಾಸಗಳ ಮೂಲಕ ಕಾವ್ಯ ಕುಸುರಿ ಮಾಡಿದ ಕಲೆಯಂತಿದೆ. ಇದನ್ನು ಭಾವ ಪೂರ್ಣವಾಗಿ ಹಾಡಲೂಬಹುದು. ಗಜಲ್‌ ಎಂಬುದು ಧ್ಯಾನ, ಧ್ಯಾನದ ಉನ್ಮಾದದಿಂದ ಉತ್ಸಾಹಗೊಂಡು ರೂಪು ತಳೆಯುತ್ತವೆ. ತನ್ನದೇ ಆದ ಗಾಂಭೀರ್ಯವಿದೆ, ಲಯ ಮಾಧುರ್ಯವಿದೆ.

ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆಲವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲವಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೆ. ನಾನು ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಿದ್ದೇನೆ. ವಿಚಿತ್ರವೆಂದರೆ ಇಂತಹ ಭಾವಗಳು ಗಜಲ್ ಪ್ರಕಾರಕ್ಕೆ ಒಗ್ಗದೇ ಇರುವುದು. ಗಜಲ್ ಕಾವ್ಯ ಪ್ರಕಾರದಲ್ಲಿ ಹಲವಾರು ಕವಿಗಳು ಈಗಾಗಲೇ ಗಜಲ್ ರಚಿಸುತ್ತಿದ್ದಾರೆ.

ಹಾಗೇಯೇ ಅಭಿಷೇಕ್‌ ಬಳೆಯು ತನ್ನ ಗಜಲನ್ನು ʼಅಭಿʼ ಎಂಬ ಅಂಕಿತದೊಂದಿಗೆ ರಚಿಸಿದ್ದಾನೆ. ತನ್ನ ಅಂತರಂಗದ ಭಾವವನ್ನು ಮತ್ತು ಸ್ತ್ರೀ-ಪುರುಷರೊಳಗಿನ ಮನಸ್ಸಿನ ತೊಳಲಾಟವನ್ನು ಗಜಲಿನ ಪ್ರಕಾರದಲ್ಲಿ ವೈಚಾರಿಕವಾಗಿ ಹೇಳಿರುವುದು ಪ್ರಶಂಸನೀಯ.

ಕಾವ್ಯ ಪ್ರಕಾರವಾದ ಕವಿತೆ, ಕವನದ ನಿರ್ಭೀಡ ಹಾದಿಯನ್ನು ಬಿಟ್ಟು ಹೊಸತೆನಿಸಿದ ಗಜಲ್‌ ಪ್ರಕಾರವನ್ನು ಕಲಿತು, ಸಿದ್ಧಿಸಿಕೊಂಡು ಅಭಿಯು ತನ್ನ ಗಜಲ್‌ ಬರಹವನ್ನು ಆರಂಭಿಸಿದ್ದಾನೆ.

ʼಗೋರಿ ಮೇಲಿನ ಹೂʼ ಗಜಲ್‌ ಸಂಕಲನದೊಳಗಿನ ಪ್ರತಿಯೊಂದು ಗಜಲಿಗೆ ತನ್ನದೆ ಆದ ವಿಶಿಷ್ಟತೆಯ ವಸ್ತು ವಿಷಯವಿದೆ. ಸಖ-ಸಖಿ, ಗೆಳೆಯ-ಗೆಳತಿ ಲಿಂಗಸೂಚಿಯಾಗಿರುವ ಗಜಲುಗಳಲ್ಲಿ ಸವಾಲು-ಜವಾಬು, ಪ್ರಶ್ನೆ-ಉತ್ತರ ಹಾಗೂ ಕ್ರಿಯೆ-ಪ್ರತಿಕ್ರಿಯೆ ರೀತಿಯ ಸಂವಾದ ನಡೆಯುತ್ತದೆ. ಬಹುತೇಕ ಸಾಮಾನ್ಯವಾಗಿ ಗಜಲುಗಳಲ್ಲಿ ಬಳಸುವ ಸಾಕಿ, ಮಧು, ಮಧುಶಾಲೆ ಪ್ರಸ್ತಾಪವಿದೆ. ಹಾಗೇಯೇ ಗಜಲುಗಳಲ್ಲಿ ಹೆಚ್ಚಾಗಿ ತನ್ನ ಸುತ್ತ ಮುತ್ತಲಿನ ಪ್ರದೇಶಗಳ ವೈವಿಧ್ಯತೆ, ಪ್ರಾಕೃತಿಕ ಸೊಬಗು, ಭಿನ್ನತೆಗಳು ಕಾಣಿಸುತ್ತವೆ. ಆಹಾರ ಪದ್ದತಿ, ತಾಯಿ ಪ್ರೀತಿ, ಕುಲ ಕಸುಬುಗಳ ಶ್ರೇಷ್ಟತೆಯ ಮಹತ್ವವನ್ನು ತಿಳಿಸಲಾಗಿದೆ.

ʼಗೋರಿ ಮೇಲಿನ ಹೂʼ ಎಂಬ ಮುಸ್ಲಿಂ ಸಂವೇದನೆಯ ಗಜಲ್‌ ಸಂಕಲನಕ್ಕೆ ಹಿಡುವ ಮೂಲಕ ಕೋಮು ಸೌಹಾರ್ಧತೆ, ಧಾರ್ಮಿಕ ಸಹಿಷ್ಣತೆಯನ್ನು ಮೆರೆದಿದ್ದಾನೆ. ಇಲ್ಲಿನ ಬಹುತೇಕ ಗಜಲುಗಳಲ್ಲಿ ಬರುವ ಬುದ್ಧ, ಗಣೇಶ, ಶರೀಪ, ಬೀಬಿ ಫಾತಿಮಾ, ರೇಣುಕಾ ಯಲ್ಲಮ್ಮ ಮುಂತಾದ ದೈವಿಕ ಹಾಗೂ ಆಧ್ಯಾತ್ಮಿಕ ಪಾತ್ರಗಳು ಧರ್ಮದ ಎಲ್ಲೆ ಮೀರಿ ಮಾನವತೆಯೇ ಪಾಠವನ್ನು  ತನ್ನದೇ ನೆಲೆಯಲ್ಲಿ ಅಭಿಯು ಮಾಡಿದ್ದಾರೆ.

ಮೊದಲ ಗಜಲಿನಿಂದ ಕೊನೆಯ ಗಜಲಿನವರೆಗೆ ಅಭಿಯ ತನ್ನ ಅಂತರಾಳ ಜಗದೊಳಗಿನ ಸಕಲ ಜೀವಜಾಲದೊಡನೆ ತೋರುವ ಪ್ರೀತಿಯನ್ನು,  ಭ್ರಾತೃತ್ವ, ಭಾವೈಕ್ಯತೆಯನ್ನು ಹಾಗೂ ಸಮಾನತೆ ತಿಳಿ ಹೇಳಲೂ ಬಯಸಿದ್ದಾನೆ.

ʼಗೋರಿ ಮೇಲಿನ ಹೂʼ ಎಂದಿಗೂ ಬಾಡದಿರಲು ಅಭಿ ಹೇಳುವಂತೆ.

ಮೈಯೊಳಗಿನ ನೆತ್ತರಿನ ಬಣ್ಣ ಒಂದೇ,

ಸತ್ತಾಗ ಹೂಳುವ ಮಣ್ಣೊಂದೆ,

ಕರೆಯುವ ಹೆಸರುಗಳು ಬೇರೆಯಾದರೂ ಕಾಯುವ ದೇವರು ಒಂದೇ..

ಇಲ್ಲಿ ಪ್ರೀತಿ-ಸ್ನೇಹಗಳ ಬಂಧವನ್ನು ತೋರುವ ಮನುಷ್ಯ ಸ್ಮಶಾನಕ್ಕೆ ಹೋಗುವ ತನಕ ಮಣ್ಣು, ಗಾಳಿ, ಬೆಳಕು ಎಲ್ಲವೂ ಒಂದೇ ಎಂದು ತೋರಲು ಈ ಗಜಲಿನ ಸಾಲುಗಳು ಧನಿಯಾಗಿವೆ.

ಮನುಷ್ಯ ಬದುಕಿನ ಅಂತಿಮ ನಿಲ್ದಾಣದ ತಾಣ ಸ್ಮಶಾನ ಎಂಬ ಸಾಲು ಮನುಷ್ಯ ಬದುಕಿನಲ್ಲಿ ಎಲ್ಲವೂ ನಶ್ವರ, ಎಲ್ಲಿ ಯಾವುದು ಶಾಶ್ವತವಲ್ಲ, ಎಲ್ಲರಿಗೂ ಕೊನೆಯೆಂಬುದಿದೆ ಎಂಬುದನ್ನು ಸೂಚಿಸುತ್ತದೆ.

ʼಗೋರಿ ಮೇಲಿನ ಹೂʼ ಗಜಲ್‌ ಸಂಕಲನ ಸಂಕ್ಷಿಪ್ತ ಹಾಗೂ ಸಮಗ್ರವಾಗಿ ನೋಡಿದಾಗ ಪ್ರಕೃತಿಯ ವೈಶಿಷ್ಟ್ಯ, ಮನುಷ್ಯ ಸಂಬಂಧಗಳು, ಧಾರ್ಮಿಕ ನಂಬಿಕೆಗಳು, ಪ್ರೀತಿ-ಪ್ರೇಮಗಳ ನಿವೇದನೆ, ಸಾಮಾಜಿಕ, ರಾಜಕೀಯ ಹಾಗೂ ವ್ಯಕ್ತಿ ಚಿತ್ರಗಳ ಮಹತ್ವ ಹಂತ ಹಂತವಾಗಿ ವ್ಯಕ್ತವಾಗಿರುವುದು ತೋರುತ್ತವೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ